ಪೋರ್ಟ್‍ಲೆಂಡ್

1. ಅಮೆರಿಕ ಸಂಯುಕ್ತ ಸಂಸ್ಥಾನಗಳ ಅರೆಗಾನ್ ರಾಜ್ಯದ ರೇವು ಪಟ್ಟಣ. ಆ ರಾಜ್ಯದ ಅತ್ಯಂತ ದೊಡ್ಡ ನಗರ.  ಮಲ್ಟ್‍ನೋಮಕೌಂಟಿಯ ಆಡಳಿತ ಕೇಂದ್ರ.  ವಿಲಾವೆಂಟ್ ನದಿಯ ದಡದಲ್ಲಿ ಅದು ಕೊಲಂಬಿಯದೊಂದಿಗೆ ಸಂಗಮಿಸುವ ಸ್ಥಳದ ಹತ್ತಿರದಲ್ಲಿ ಉ.ಅ. 45033' ಮತ್ತು ಪೂ.ರೇ. 122036' ಮೇಲೆ ಇದೆ.  ಜನಸಂಖ್ಯೆ 1793476 (2001). ಇದೊಂದು ವಾಣಿಜ್ಯ ಕೇಂದ್ರ. ಇಲ್ಲಿ ವ್ಯವಸಾಯ ಮತ್ತು ಅರಣ್ಯ ಉತ್ಪನ್ನಗಳು ಹೆಚ್ಚಾಗಿ ವ್ಯಾಪಾರವಾಗುತ್ತವೆ. ಇದೊಂದು ನೌಕಾನಿರ್ಮಾಣ ಕೇಂದ್ರವೂ ಕೈಗಾರಿಕಾ ಕೇಂದ್ರವೂ ಹೌದು. ಇಲ್ಲಿ ರಾಸಾಯನಿಕ ಮತ್ತು ಲೋಹ ಕೈಗಾರಿಕೆಗಳಿವೆ. ಮಾಂಸ, ಹತ್ತಿ, ಜವಳಿ, ನಾಟ ಮುಂತಾದ ಕೈಗಾರಿಕೆಗಳಿವೆ. ಇದಕ್ಕೆ ಉತ್ರ ಫೆಸಿಪಿಕ್ ಖಂಡಾಂತರ ರೈಲುಮಾರ್ಗ ಸಂಪರ್ಕವಿದೆ. ಇಲ್ಲಿ ಆಳ ಕಡಲು ರೇವು ಸೌಲಭ್ಯವಿದೆ. ಹಣ್ಣು ಮತ್ತು ತರಕಾರಿಗಳನ್ನು ಇಲ್ಲಿಂದ ಹೆಚ್ಚಾಗಿ ರಫ್ತು ಮಾಡಲಾಗುತ್ತಿದೆ. ಇದು ಪೋರ್ಟ್‍ಲೆಂಡ್ ವಿಶ್ವವಿದ್ಯಾಲಯದ ಕೇಂದ್ರ. ಇಲ್ಲಿ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿವೆ. 1829 ರಲ್ಲಿ ಇಲ್ಲಿ ವಸತಿ ಪ್ರಾರಂಭವಾಯಿತು.  ಇದರ ಸಮೀಪದಲ್ಲಿ 189 ಮೀ. ಎತ್ತರದ ಮಲ್ಟ್‍ನೋಮ ಜಲಪಾತವಿದೆ.

2. ಅಮೆರಿಕದ ಮೇನ್ ರಾಜ್ಯದ ಕಂಬರ್‍ಲೆಂಡ್ ಕೌಂಟಿಯ ಆಡಳಿತ ಕೇಂದ್ರ. ನೈಋತ್ಯ ಮೇನ್‍ನಲ್ಲಿ ಕ್ಯಾಸ್ಕೊ ಕೊಲ್ಲಿಯ ಮೇಲೆ ಪೂ.ಅ. 43039' ಮತ್ತು ಪೂ.ರೇ. 70017' ಮೇಲೆ ಇದೆ. ಜನಸಂಖ್ಯೆ 2,21,095 (2001). ಈ ನಗರವನ್ನು ಕ್ಯಾಸ್ಕೊ ಕೊಲ್ಲಿ ಮತ್ತು ಅದರ ಕೆಲವು ದ್ವೀಪಗಳಿಗೆ ಎದುರಾಗಿ ಚಾಚಿರುವ ಎರಡು ದಿಬ್ಬಗಳ ಮೇಲೆ ನಿರ್ಮಿಸಲಾಗಿದೆ. ಈ ನಗರ ಮೊದಲಿನಿಂದಲೂ ಮೀನುಗಾರಿಕೆ ನೌಕಾ ನಿರ್ಮಾಣ ಮತ್ತು ವಾಣಿಜ್ಯಕ್ಕೆ ಹೆಸರಾಗಿದೆ. ಈಗ ಇದು ಮುಖ್ಯ ಸಾರಿಗೆ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇದು ಪೆಟ್ರೋಲಿಯಮ್ ಸಾಗಣೆಯ ಮುಖ್ಯ ಬಂದರು. ಪೋರ್ಟ್‍ಲೆಂಡ್ ಮಾಂಟ್ರಿಯಲ್ ಎಣ್ಣೆ ಕೊಳವೆ ಮಾರ್ಗದ ಪೂರ್ವ ತುದಿಯ ಕೇಂದ್ರ. ಕಾಗದ ತಯಾರಿಕೆ, ಮುದ್ರಣ, ಆಹಾರ ಸಂಸ್ಕರಣ, ಹತ್ತಿ ಜವಳಿ, ನಾಟ ಮತ್ತು ಮರದ ಉತ್ಪನ್ನಗಳು ರಾಸಾಯನಿಕ ವಸ್ತುಗಳು, ಲೋಹ ವಸ್ತುಗಳು, ಯಂತ್ರೋಪಕರಣಗಳೂ ಮೊದಲಾದ ಕೈಗಾರಿಕೆಗಳಿವೆ.  ಇದು ಮೇನ್ ವಿಶ್ವವಿದ್ಯಾಲಯದ ಕೇಂದ್ರ. ಇಲ್ಲಿ ಕಲೆ ಮತ್ತು ಜೀವವಿಜ್ಞಾನ ವಸ್ತು ಸಂಗ್ರಹಾಲಯಗಳಿವೆ. ಇದರ ಸಮೀಪದಲ್ಲಿ ರಾಜ್ಯ ಉದ್ಯಾನಗಳಿವೆ.  1632 ರಲ್ಲಿ ಇಲ್ಲಿ ಮೊದಲು ವಸತಿಯ ಸ್ಥಾಪನೆಯಾಯಿತು.  ಈ ಪಟ್ಟಣ ಬೇರೆಬೇರೆ ಹೆಸರುಗಳನ್ನು ತಳೆದಿತ್ತು.  ಇದಕ್ಕೆ 1786 ರಲ್ಲಿ ಪೋರ್ಟ್‍ಲೆಂಡ್ ಎಂಬ ಹೆಸರು ಬಂತು.  1820 ರಿಂದ 1832 ರ ವರೆಗೆ ಇದು ಮೇನ್ ರಾಜ್ಯದ ರಾಜಧಾನಿಯಾಗಿತ್ತು. 

3. ಅಮೆರಿಕದ ಕನೆಟಿಕಟ್ ರಾಜ್ಯದ ಮಿಡ್ಸ್‍ಸೆಕ್ಸ್ ಕೌಂಟಿಯ ಒಂದು ಕೃಷಿಪ್ರಧಾನ ಪಟ್ಟಣ. ಜನಸಂಖ್ಯೆ 14,063 (2001).

4. ಆಗ್ನೇಯ ಆಸ್ಟ್ರೇಲಿಯದಲ್ಲಿ ನೈಋತ್ಯ ವಿಕ್ಟೋರಿಯದ ಒಂದು ಪಟ್ಟಣ. ಪೋರ್ಟ್‍ಲೆಂಡ್ ಬೇ ಮೇಲೆ ಇದೆ.  ಮೆಲ್‍ಬರ್ನ್ ನಗರಕ್ಕೆ ಪóಶ್ಚಿಮ ನೈಋತ್ಯದಲ್ಲಿ 296 ಕಿ.ಮೀ. ದೂರದಲ್ಲಿದೆ. ಇದೊಂದು ರೇವು ಪಟ್ಟಣ.

5.  ದಕ್ಷಿಣ ಇಂಗ್ಲೆಂಡಿನ ಡಾರ್ಸೆಟ್‍ಷೈರ್‍ನ ಒಂದು ನಗರ ಪ್ರದೇಶ. ವೇಮತ್‍ಗೆ 6.4 ಕಿ.ಮೀ. ದಕ್ಷಿಣದಲ್ಲಿದೆ.
										(ಡಿ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ